ಬಾಕ್ಸರ್ ದಂಗೆ
ಚೀನದಲ್ಲಿ 1900ರಲ್ಲಿ ನಡೆದ ದಂಗೆ. ಪಶ್ಚಿಮದ ದೇಶಗಳೂ ಜಪಾನೂ ಚೀನದಲ್ಲಿ ಅಹಿತಕರ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುತ್ತಿದ್ದುದನ್ನು ಚೀನಿಯರು ಪ್ರತಿಭಟಿಸಿ ದಂಗೆ ಎದ್ದರು. 19ನೆಯ ಶತಮಾನದ ದ್ವಿತೀಯಾರ್ಧದಲ್ಲಿ ಫ್ರಾನ್ಸ್, ಇಂಗ್ಲೆಂಡ್, ರಷ್ಯ, ಜರ್ಮನಿಗಳು ಚೀನದಲ್ಲಿ ಅನೇಕ ರಿಯಾಯಿತಿಗಳನ್ನು ಪಡೆದುವು. ಚೀನದ ಅತ್ಯಂತ ಮುಖ್ಯ ಭಾಗಗಳು ಪರಕೀಯರ ಪಾಲಾದವು. ಪ್ರತಿಯೊಂದು ಯೂರೋಪಿಯನ್ ರಾಷ್ಟ್ರವೂ ಚೀನದಲ್ಲಿ ತನಗೆ ಬೇಕಾದ ಭಾಗದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಿ ಸಮಯ ಒದಗಿದಾಗ ಆ ಭಾಗವನ್ನು ವಸಾಹತಾಗಿ ಪರಿವರ್ತಿಸಿಕೊಳ್ಳಲು ಹವಣಿಸುತ್ತಿತ್ತು. ಚೀನದಲ್ಲಿ ರೈಲುಮಾರ್ಗಗಳನ್ನು ನಿರ್ಮಿಸಲು ಈ ದೇಶಗಳು ಸ್ಟರ್ಧೆಯಿಂದ ಮುಂದುವರಿದವು. ಕೆಲವು ಚೀನೀ ಮುಖಂಡರು ದೇಶದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತರಲು ಯತ್ನಿಸಿದರು. ಆದರೆ ಇವಕ್ಕೆ ಸಂಪ್ರದಾಯವಾದಿಗಳ ವಿರೋಧವಿತ್ತು. ಸಂಪ್ರದಾಯವಾದಿಗಳ ಪ್ರತಿಭಟನೆಯ ಜೊತೆಗೆ, ಪರದೇಶಿಯರನ್ನು ಚೀನದಿಂದ ಓಡಿಸಲು ಜನರು ದಂಗೆಯೆದ್ದರು. ಜನರಲ್ಲಿ ಅಸಮಾಧಾನ ಬೇರೂರಿತ್ತು. ಸರ್ಕಾರ ರಾಷ್ಟ್ರ ರಕ್ಷಣೆಯನ್ನು ಭದ್ರಪಡಿಸುವುದಕ್ಕಾಗಿ ಚೀನದ ಈಶಾನ್ಯ ಭಾಗಗಳಲ್ಲಿ ಜನತಾ ಸೈನ್ಯದ ವ್ಯವಸ್ಥೆ ಮಾಡಿತು. ಈ ಸೈನ್ಯದ ಜೊತೆಗೆ ಇತರರೂ ರಹಸ್ಯ ಸಂಸ್ಥೆಯವರೂ ಸೇರಿದರು. ರಹಸ್ಯ ಪೂಜಾವಿಧಿಗಳಿಂದಾಗಿ ಬಂದೂಕಿನ ಗುಂಡುಗಳಿಂದ ತಮಗೆ ಅಪಾಯ ಒದಗುವುದಿಲ್ಲವೆಂದು ಈ ಜನರು ಪ್ರಚಾರ ಮಾಡಿದ್ದರು. ಈ ಗುಂಪುಗಳಿಗೆ ಐ ಹೋ ತುಮಾನ್ ಅಥವಾ ಐ ಹೋ ಚುವಾನ್ ಎಂದು ಹೆಸರಿತ್ತು. ನ್ಯಾಯಬದ್ಧ ಸಮನ್ವಯ ಮುಷ್ಟಿ ಎಂದು ಇದರ ಅರ್ಥ. ಆದ್ದರಿಂದ ಈ ಗುಂಪುಗಳ ಜನರು ಮುಷ್ಟಿಕಾಳಗ ಮಲ್ಲರೆಂದು ಅಥವಾ ಬಾಕ್ಸ್‍ರ್‍ಗಳೆಂದು ಹೆಸರಾದರು. ದೇಶವನ್ನು ರಕ್ಷಿಸಿ, ವಿದೇಶೀಯರನ್ನು ನಾಶಗೊಲಿಸಿ-ಎಂಬುದು ಇವರ ಘೋಷಣೆ. 1890ರಲ್ಲಿ ಷಾಂಟುಂಗ್ ಪ್ರಾಂತ್ಯದಲ್ಲಿ ಇವರು ಕ್ರೈಸ್ತರನ್ನು ಚಿತ್ರಹಿಂಸೆಗೆ ಒಳಪಡಿಸಿದರು. ಪಾಶ್ಚಾತ್ಯ ರಾಷ್ಟ್ರಪ್ರತಿನಿಧಿಗಳು ಗಾಬರಿಗೊಂಡು ಆ ಪ್ರಾಂತ್ಯದ ಗವರ್ನರ್ ಯು ಹ್ಸಿಯೆನನ್ನು ಹಿಂದಕ್ಕೆ ಕರೆಸಲು ಒತ್ತಾಯಪಡಿಸಿದರು. ಗಲಭೆಗಳು ಹೆಚ್ಚಾದುವು. 1900 ಜೂನ್ 17ರಂದು ವಿದೇಶೀಯರು ಟಾಕು ಕೋಟೆಯನ್ನು ಹಿಡಿದಾಗ ದಂಗೆ ಪ್ರಾರಂಭವಾಯಿತು. ಪರದೇಶೀಯರನ್ನೆಲ್ಲ ಕೊಲ್ಲಬೇಕೆಂದು ಹಿರಿಯ ಚಕ್ರವರ್ತಿನಿ ಆಜ್ಞೆ ಮಾಡಿದಳು. ಜರ್ಮನ್ ರಾಯಭಾರಿಯ ಕೊಲೆಯಾಯಿತು. ಇತರ ವಿದೇಶೀ ರಾಯಭಾರಿ ವರ್ಗದವರೂ ಮತ ಪ್ರಚಾರಕರೂ ಸಾವಿರಾರು ಕ್ರೈಸ್ತರೂ ಪೀಕಿಂಗ್‍ನಲ್ಲಿ ಮುತ್ತಿಗೆಗೆ ಒಳಗಾದರು. ಚೀನೀ ಆಡಳಿತಗಾರರರು ಬಾಕ್ಸ್‍ರ್‍ಗಳನ್ನು ಅಡಗಿಸಲು, ವಿದೇಶೀಯರಿಗೆ ಸಹಾಯ ಮಾಡಿದರು. ಅಂತರರಾಷ್ಟ್ರೀಯ ಸೈನ್ಯ ಆಗಸ್ಟ್ 14ರಂದು ಪೀಕಿಂಗ್ ನಗರವನ್ನು ಮುತ್ತಿತು. ಚಕ್ರವರ್ತಿಯ ಆಸ್ಥಾನೀಕರು ಹ್ಸಿಯಾನ್ ಫು ಎಂಬಲ್ಲಿಗೆ ಓಡಿಹೋದರು. ವಿದೇಶೀ ಸೈನ್ಯ ಪೀಕಿಂಗ್ ನಗರವನ್ನು ಲೂಟಿ ಮಾಡಿ, ಕ್ರೈಸ್ತರನ್ನೂ ತಮ್ಮ ರಾಷ್ಟ್ರೀಯರನ್ನೂ ಬಿಡುಗಡೆ ಮಾಡಿತು.

	ವಿಜಯಿಗಳಾದ ವಿದೇಶೀಯರು ಪುನಃ ದಂಗೆಗಳು ಆಗದಂತೆ ಮಾಡಲೂ ತಪ್ಪು ದಂಡವನ್ನು ವಸೂಲು ಮಾಡಲೂ ತೀರ್ಮಾನಿಸಿ, 1901ರಲ್ಲಿ ತಮ್ಮ ಷರತ್ತುಗಳನ್ನು ಚೀನೀಯರ ಮೇಲೆ ಹೇರಿದರು. ವಿಜಯಿಗಳಲ್ಲೇ ಉದ್ಭವಿಸಿದ ಭಿನ್ನಾಭಿಪ್ರಾಯಗಳಿಂದ ಚೀನ ದೇಶ ಉಳಿದುಕೊಂಡಿತು. ಚೀನೀ ಸರ್ಕಾರ ದಂಗೆಕೋರರನ್ನು ಶಿಕ್ಷಿಸಬೇಕೆಂದೂ ಸತ್ತ ಪರದೇಶಿಯರಲ್ಲಿ ಕೆಲವರಿಗೆ ಸ್ಮಾರಕಗಳನ್ನು ಕಟ್ಟಬೇಕೆಂಬುದೂ ಜರ್ಮನ್ ರಾಯಭಾರಿಯ ಕೊಲೆಯಾದ್ದಕ್ಕೆ ಕ್ಷಮಾಪಣೆ ಕೇಳಬೇಕೆಂಬುದೂ ವಿದೇಶೀಯರ ಕೊಲೆಗೆ ಒಳಗಾಗಿದ್ದ ನಗರಗಳಲ್ಲಿ ಐದು ವರ್ಷಗಳ ಕಾಲ ಸರ್ಕಾರ ಸ್ಪರ್ಧಾ ಪರೀಕ್ಷೆಗಳನ್ನು ಏರ್ಪಡಿಸಕೂಡದೆಂಬುದೂ ಎರಡು ವರ್ಷಗಳ ಕಾಲ ಅದು ಶಸ್ತ್ರಾಸ್ತ್ರಗಳನ್ನು ತರಿಸಕೂಡದೆಂಬುದೂ ಅದು ವಿದೇಶೀಯರಿಗೆ 45 ಕೋಟಿ ಟೆಲ್‍ಗಳಷ್ಟು ಪರಿಹಾರಧನ ಕೊಡಬೇಕೆಂಬುದೂ ಷರತ್ತುಗಳು. ಪರಿಹಾರ ಧನಕ್ಕಾಗಿ ವಿದೇಶೀಯರು ಸುಂಕ ವಸೂಲಿಯನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡರು. ವಿದೇಶೀ ರಾಯಭಾರ ವರ್ಗದವರಿಗೆ ಸೈನಿಕ ರಕ್ಷಣೆಯನ್ನು ಒದಗಿಸಿ ಪೀಕಿಂಗ್ ನಗರದಿಂದ ಸಮುದ್ರದವರೆಗೆ ಸಂಪರ್ಕ ರಕ್ಷಣೆಗಾಗಿ ಇಡುವ ವಿದೇಶೀ ಸೈನ್ಯದ ಖರ್ಚು ಕೊಡಬೇಕೆಂದೂ ವಿದೇಶೀಯರ ವಿರುದ್ಧ ದಂಗೆಗಳಾಗದಂತೆ ಕಾನೂನು ಮಾಡಬೇಕೆಂದೂ ಮತ್ತಷ್ಟು ವ್ಯಾಪಾರ ರಿಯಾಯತಿಗಳನ್ನು ಕೊಡಬೇಕೆಂದೂ ಅವರು ಕೇಳಿದರು. ದುರ್ಬಲವಾಗಿದ್ದ ಚೀನೀ ಸರ್ಕಾರ ಅವಮಾನಕರವಾದ ಈ ಷರತ್ತುಗಳನ್ನು ಒಪ್ಪಿಕೊಳ್ಳಬೇಕಾಯಿತು.					
(ಎಚ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ